ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್
ಭಾರತ ಮತ್ತು ಇತರ ದೇಶಗಳ ಸಾಂಸ್ಕøತಿಕ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರದ ನೆರವಿನಿಂದ ದೆಹಲಿಯಲ್ಲಿ ಸ್ಥಾಪಿತವಾಗಿರುವ ಸ್ವಯಾಡಳಿತ ಸಂಸ್ಥೆ.

	ಅನುಸ್ಥಾಪನ (ಓರಿಯಂಟೇಷನ್) ಶಿಕ್ಷಾಕ್ರಮ, ಬೇಸಗೆಶಿಬಿರ, ವಿದೇಶೀ ವಿದ್ಯಾರ್ಥಿಗಳ ಸಲುವಾಗಿ ಸ್ನೇಹಮಿಲನ ಕಾರ್ಯಕ್ರಮ, ವಿಖ್ಯಾತ ವಿದ್ವಾಂಸರ ವಿನಿಮಯ, ಭಾರತದ ಹೊರಗಿನ ವಿಶ್ವವಿದ್ಯಾನಿಲಯಗಳಲ್ಲಿ ಭಾರತೀಯಶಾಸ್ತ್ರ ಪೀಠಗಳ ಸ್ಥಾಪನೆ, ವಿದೇಶಗಳಲ್ಲಿ ಭಾರತೀಯ ಸಂಸ್ಕøತಿಯ ಅಧ್ಯಾಪಕರ ನೇಮಕ, ಭಾರತದಲ್ಲಿರುವ ವಿದೇಶೀ ವಿದ್ಯಾರ್ಥಿಗಳ ಕ್ಷೇಮಪಾಲನೆ, ಅನ್ಯದೇಶಗಳಿಂದ ಭಾರತಕ್ಕೆ ಆಗಮಿಸುವ ಗಣ್ಯ ಅತಿಥಿಗಳ ಸ್ವಾಗತವ್ಯವಸ್ಥೆ, ಭಾರತೀಯ ಸಂಸ್ಕøತಿಯನ್ನು ಕುರಿತು ಪ್ರದರ್ಶನಗಳ ಏರ್ಪಾಡು-ಇವು ಈ ಸಂಸ್ಥೆಯ ಮುಖ್ಯ ಕಲಾಪಗಳು.

	ಈ ಸಂಸ್ಥೆ ಇಂಡೋ-ಏಷ್ಯನ್ ಕಲ್ಚರ್ ಎಂಬ ಆಂಗ್ಲ ತ್ರೈಮಾಸಿಕವನ್ನೂ ತಕಾಫತ್-ಉಲ್-ಹಿಂದ್ ಎಂಬ ಅರಬ್ಬೀ ತ್ರೈಮಾಸಿಕವನ್ನೂ ಪ್ರಕಟಿಸುತ್ತದೆ. ಕಲ್ಚರಲ್ ನ್ಯೂಸ್ ಫ್ರಂ ಇಂಡಿಯ ಎಂಬ ದ್ವೈಮಾಸಿಕ ವಾರ್ತಾಪತ್ರವನ್ನು ಪ್ರಕಟಿಸುತ್ತದೆ. ಇದು ಭಾರತೀಯ ಸಂಸ್ಕøತಿಗೆ ಸಂಬಂಧಿಸಿದ ಕೃತಿಗಳ ಪ್ರಕಟನೆಯ ಕಾರ್ಯವನ್ನೂ ವಿದೇಶೀಭಾಷೆಗಳಿಗೆ ಅವುಗಳ ಅನುವಾದಕಾರ್ಯವನ್ನೂ ಕೈಕೊಂಡಿದೆ. ಶಾಂತಿ ಹಾಗೂ ಅಂತರರಾಷ್ಟ್ರೀಯ ಸೌಹಾರ್ದದ ಬೆಳವಣಿಗೆಗಾಗಿ ಭಾರತ ಸರ್ಕಾರದಿಂದ ಸ್ಥಾಪಿತವಾದ ಜವಾಹರಲಾಲ್ ನೆಹರು ಪಾರಿತೋಷಕ ಪ್ರಧಾನ ಕಾರ್ಯವನ್ನು ಈ ಸಂಸ್ಥೆ ನಿರ್ವಹಿಸುತ್ತದೆ.					
 (ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ